Monday, 1 August 2016

ನಮ್ಮ ನಾಡಿಯನ್ನು ಶುದ್ಧಿಗೊಳಿಸುವುದು ಹೇಗೆ ?

🔵'ಯೋಗ'ಕ್ಷೇಮ🔵

ನಮ್ಮ ನಾಡಿಯನ್ನು ಶುದ್ಧಿಗೊಳಿಸುವುದು ಹೇಗೆ ?

ನಾಡಿ ಎಂಬುದು ಸಂಸ್ಕೃತದ ‘ನದ’ ಎಂಬ ಶಬ್ಧದಿಂದ ಬಂದಿದೆ. ಪ್ರಾಣಶಕ್ತಿ ಸಂಚರಿಸುವ ಕೊಳವೆ ಅಥವಾ ಜೀವ ಇರುವ ಕೊಳವೆಗಳಲ್ಲಿ ಪ್ರಾಣದ ಸಂಚಾರವೇ ನಾಡಿ. ಹಠ ಪ್ರದೀಪಿಕಾ ಗ್ರಂಥದ ಅನ್ವಯ ನಮ್ಮ ಶರೀರದಲ್ಲಿ 72,000 ನಾಡಿಗಳಿವೆ. ಇವುಗಳಲ್ಲಿ ಕೆಲವು ಸ್ಥೂಲವಾದವು. ಇನ್ನು ಹಲವು ನಾಡಿಗಳು ಸೂಕ್ಷ್ಮವಾಗಿದ್ದು, ಬರಿಗಣ್ಣಿಗೆ ಕಾಣುವುದಿಲ್ಲ. ಎಲ್ಲವನ್ನೂ ಸೇರಿ ಶಿವಸಂಹಿತಾ ಗ್ರಂಥವು 3,50,000 ನಾಡಿಗಳನ್ನು ದಾಖಲಿಸಿದೆ.

ಇವುಗಳ ಪೈಕಿ 14 ನಾಡಿ ಬಹು ಮುಖ್ಯವಾಗಿವೆ. ಅವುಗಳೆಂದರೆ ಇಡಾ, ಪಿಂಗಲಾ, ಸುಷುಮ್ನಾ, ಗಾಂಧಾರಿ, ಹಸ್ತಿಜಿಹ್ವಾ, ಸರಸ್ವತಿ, ಪುಷಾ, ಕುಹು, ಪಯಸ್ವನೀ, ಶಂಕಿನೀ, ಯಶಸ್ವಿನೀ, ವಾರುಣೀ, ವಿಶೋಧರೀ, ಈಲಂಬುಷಾ.

ಇವುಗಳಲ್ಲಿ 3 ನಮ್ಮ ಅರಿವಿಗೆ ಮುಖ್ಯವಾಗಿವೆ. ನಮ್ಮ ದೇಹವೇ ಒಂದು ಪ್ರಪಂಚ. ಹಠ ಎಂಬ ಎರಡಕ್ಷರ ಗಳಿಂದಾದ ಪದದಲ್ಲಿ ‘ಹ’ ಎಂಬುದು ಸೂರ್ಯನನ್ನು, ‘ಠ’ ಎಂಬುದು ಚಂದ್ರನ ಸೂಚಕ. ಸೂರ್ಯನ ಸಂಬಂಧವಾದ ಚೈತನ್ಯ ಪಿಂಗಳಾ ನಾಡಿಯ ಮೂಲಕ, ಚಂದ್ರ ಸಂಬಂಧ ಚೈತನ್ಯ ಪಿಂಗಳಾ ನಾಡಿ ಮೂಲಕವೂ ಪ್ರವೇಶಿಸುತ್ತವೆ. ಅವು ಕ್ರಮವಾಗಿ ಬಲ ಮತ್ತು ಎಡ ಮೂಗಿನ ಹೊಳ್ಳೆಗಳಲ್ಲಿ ಉಸಿರಿನ ರೂಪದಲ್ಲಿ ದೇಹದ ಒಳಹೊಕ್ಕು ಬೆನ್ನೆಲುಬಿನ ತಳಭಾಗ ಮುಟ್ಟುತ್ತದೆ. ಹಾಗಾಗಿ ಪಿಂಗಳಾ ಎಂಬುದು ಸೂರ್ಯನಾಡಿ. ಇಡಾ ಎಂಬುದು ಚಂದ್ರನಾಡಿಯಾಗಿದೆ. ಈ ಮಧ್ಯೆ ಇರುವುದು ಸುಷುಮ್ನಾ ನಾಡಿ. ಇದು ಅಗ್ನಿನಾಡಿ. ಬೆನ್ನು ಮೂಳೆಯ ಒಳಗಿನ ಭಾಗದಲ್ಲಿಯೇ ಇದರ ನೆಲೆ. ಈ ನಾಡಿ ಮೂಲಕವೇ ನರಮಂಡಲದ ಚೈತನ್ಯ ಪ್ರವಹಿಸುತ್ತದೆ. ಪಿಂಗಳಾ ಮತ್ತು ಇಡಾ ನಾಡಿಗಳು ಒಂದನ್ನೊಂದು ಮತ್ತು ಇವೆರಡೂ ಸುಷುಮ್ನಾ ನಾಡಿಯನ್ನೂ ಬೇರೆ ಬೇರೆ ಸ್ಥಾನಗಳಲ್ಲಿ ಸೇರುತ್ತದೆ. ಹೀಗೆ ಒಂದನ್ನೊಂದು ಸೇರುವ ಸ್ಥಳಗಳಿಗೆ ಚಕ್ರ ಎಂದು ಹೆಸರು.

ಪ್ರಾಣ ಸಂಚಾರ ಸುಗಮ:

ನಾವು ಆರೋಗ್ಯದಿಂದ ಇರಲು ನಾಡಿಗಳು ಶುದ್ಧವಾಗಿರಬೇಕು. ಒಂದು ವೇಳೆ ನಾಡಿಗಳು ಶುದ್ಧವಿಲ್ಲದಿದ್ದರೆ (ಪ್ರಾಣ ಸಂಚಾರ ಸರಿಯಾಗದಿದ್ದರೆ) ವಿವಿಧ ಕಾಯಿಲೆ ಬರುತ್ತವೆ. ಅಭ್ಯಾಸಿಗೆ ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕವಾಗಿ ಯೋಗದಲ್ಲಿ ಮುಂದೆ ಸಾಗಲು ಕಷ್ಟವಾಗುತ್ತದೆ. ಆಗ ಅಭ್ಯಾಸದ ಮೂಲಕ (ಆಸನ, ಕ್ರಿಯಾ, ಮುದ್ರಾ, ಪ್ರಾಣಾಯಾಮ ಇತ್ಯಾದಿ) ನಾಡಿ ಶುದ್ಧಗೊಳಿಸಿದರೆ ಯೋಗಾಭ್ಯಾಸ ಸರಾಗ. ಹೀಗೆ ನಾಡಿಗಳು ಶುದ್ಧಗೊಂಡರೆ ಆರೋಗ್ಯದ ಜೊತೆಗೆ ಕುಂಡಲಿನಿ ಶಕ್ತಿಯೂ ಜಾಗೃತಗೊಂಡು ನಾವು ಸಮಾಧಿ ಅವಸ್ಥೆವರೆಗೂ ತಲುಪಬಹುದು.

🔸🔹🔸🔹🔸🔹🔸🔹🔸

No comments:

Post a Comment