Thursday, 4 August 2016

ಯಾವುದು ವಿಸ್ಮಯ ? [osho ]

ಯಾವುದು ವಿಸ್ಮಯ ?

 [osho ]

ವಿಸ್ಮಯಕ್ಕೆ ಶಬ್ದ ಕೋಶದ ಅರ್ಥ ಆಶ್ಚರ್ಯವೆಂದು . ಆದರೆ ಆಶ್ಚರ್ಯ ಮತ್ತು ವಿಸ್ಮಯಗಳಲ್ಲಿ ಒಂದು ಮೂಲಭೂತವಾದ ಭೇದವಿದೆ . ಆ ಭೇದವು ತಿಳಿಯಬೇಕಾಗಿದೆ . ಆಶ್ಚರ್ಯವು ವಿಜ್ಞಾನಕ್ಕೆ ಭೂಮಿಕೆಯಾಗಿದೆ . ವಿಸ್ಮಯವು ಯೋಗಕ್ಕೆ ; ಅದು ಅಂತರ್ಮುಖಿಯಾದುದು .
 ಆಶ್ಚರ್ಯವು ಮತ್ತೊಂದರ ಬಗ್ಗೆ ಉಂಟಾಗುವುದು . ಆದರೆ ವಿಸ್ಮಯವು ಸ್ವಯಂ ನ ಬಗ್ಗೆ ಉಂಟಾಗುವುದು .
ಯಾವುದನ್ನು ನಾವು ತಿಳಿಯಲಾರೆವೋ , ಯಾವುದು ನಮ್ಮನ್ನು ಬೆರಗು ಗೊಳಿಸುವುದೋ , ಯಾವುದರ ಮೇಲೆ ನಮ್ಮ ಬುದ್ಧಿಯ ಹಿಡಿತ ತಪ್ಪಿ ಹೋಗುವುದೋ , ಯಾವುದು ನಮಗಿಂತ ದೊಡ್ಡದು ಎಂದು ತೀರ್ಮಾನವಾಗುವುದೋ , ಯಾವುದರ ಮುಂದೆ ನಾವು ಅನಾಯಾಸವಾಗಿ ಕಿಂಕರ್ತವ್ಯ ವಿಮೂಢ ರಾಗುವೆವೋ , ಯಾವುದು ನಮ್ಮನ್ನೇ ಅಳಿಸಿ ಬಿಡುವುದೋ ಅದರಿಂದ ವಿಸ್ಮಯ ಹುಟ್ಟುವುದು .

ಕೆಲವು ವಸ್ತುಗಳನ್ನು ನಾವು ಬಲ್ಲೆವು -ಅದನ್ನು ನಾವು 'ಜ್ಞಾತ ' ಎನ್ನುವೆವು , ಮತ್ತೆ ಕೆಲವು ವಸ್ತುಗಳನ್ನು ನಾವಿನ್ನೂ ಅರಿತಿಲ್ಲ - ಇಂದೋ  ನಾಳೆಯೋ ತಿಳಿಯುವೆವು , ಅವು' ಅಜ್ಞಾತ ', ಇನ್ನೂ ಒಂದು ವಸ್ತು ಇದೆ , ಅದನ್ನು ಇದುವರೆಗೂ ತಿಲಿಯಲಾಗಿಲ್ಲ - ಮುಂದೂ ತಿಳಿಯಲಾರೆವು , ಅದನ್ನು ' ಆಜ್ಞೆಯ 'ಎನ್ನುವೆವು . ಪರಮಾತ್ಮ ಆಜ್ಞೆಯ
 ವಿಸ್ಮಯ ಎಂಬುದು ಒಂದು ದಿನ ಮುಗಿದು ಹೋಗುವುದಲ್ಲ ಅದು  ನಮ್ಮ ಬಗ್ಗೆ ನಾವು ಅರಿತಷ್ಟೂ ಅದು ಹೆಚ್ಚುತ್ತಲೇ ಹೋಗುವುದು .
ನಿಮ್ಮ ಬುದ್ಧಿ ಎಲ್ಲಿ ವ್ಯರ್ಥವೆನಿಸುವುದೋ ಅದೇ ವಿಸ್ಮಯ . ಎಲ್ಲಿ ನಿಮ್ಮ ಅಹಂಕಾರವು ಅಸಮರ್ಥವಾಗುವುದೋ , ಎಲ್ಲಿ ನೀವು ಅಸಹಾಯಕರಾಗುವಿರೋ , ಅಲ್ಲಿ ನೀವು ಗಟ್ಟಿಯಾಗಿ ರೋದಿಸಬಲ್ಲಿರಿ ಗಹಗಹಿಸಿ ನಗಬಲ್ಲಿರಿಆದರೆ ಮಾತನಾಡಲಾರಿರಿ . ಮಾತು ಬಾರದು .

ವಿಸ್ಮಯದಲ್ಲಿ ನೀವು ಮುಳುಗಿದರೆ ಅಲ್ಲಿ ನಿಮ್ಮ ಹಳತೆಲ್ಲವೂ ಸತ್ತು ಹೊಸತು ಹುಟ್ಟುವುದು . ವಿಸ್ಮಯದಲ್ಲಿ ಸ್ಥಿರವಾಗಿ ನಿಲ್ಲುವಿರಾದರೆ ನಿಮ್ಮಲ್ಲಿ ಪ್ರತಿ ನಿಮಿಷವೂ ಹೊಸತು ಹುಟ್ಟುತ್ತಲೇ ಇರುವುದು ಮತ್ತು ಹಳತು ಸಾಯುತ್ತಲೇ ಇರುವುದು . ಆಗ ನಿಮ್ಮ ಧಾರೆ ಮಾತ್ರ ಶಾಶ್ವತ . ಆಗ ನಿಮ್ಮಲ್ಲಿ ಶಾಶ್ವತ ಜೀವನದ ಸ್ಪುರಣೆ ಯಾಗುವುದು  

No comments:

Post a Comment