Saturday, 20 August 2016

ವಂದೇ ಮಾತರಂ...ಭಾವಾರ್ಥ

ವಂದೇ ಮಾತರಂ

ವಂದೇ ಮಾತರಂ ಗೀತೆಯನ್ನು ರಚಿಸಿದ್ದು ವಂಗ ದೇಶಭಕ್ತ ಬಂಕಿಮಚಂದ್ರ ಚಟ್ಟೋಪಾಧ್ಯಾಯ ಇವರು. ಕ್ರಿ.ಶ. ೧೮೭೬.ನಲ್ಲಿ ‘ಆನಂದಮಠ’ ಎಂಬ ಕಾದಂಬರಿಯನ್ನು ಬರೆಯುತ್ತಿರಲು ಅವರಿಗೆ ‘ವಂದೇ ಮಾತರಂ’ ಗೀತೆಯನ್ನು ರಚಿಸುವ ಪ್ರೇರಣೆ ಬಂತು ಎಂಬ ನಂಬಿಕೆ ಇದೆ. ಕ್ರಿ.ಶ. ೧೮೮೨ರಲ್ಲಿ ಈ ಕಾದಂಬರಿ ಪ್ರಕಾಶನಗೊಂಡ ಅಲ್ಪಾವಧಿಯಲ್ಲಿಯೇ ಈ ಗೀತೆ ಸ್ವಾತಂತ್ರ್ಯ ಹೋರಾಟಗಾರರ ಪ್ರೇರಣಾ ಸ್ಥಾನವನ್ನು ಗಿಟ್ಟಿಸಿತು.


ವಂದೇ ಮಾತರಮ್
ಸುಜಲಾಂ ಸುಫಲಾಂ ಮಲಯಜಶೀತಲಾಮ್
ಶಸ್ಯಶ್ಯಾಮಲಾಂ ಮಾತರಮ್ |
ಶುಭ್ರಜ್ಯೋತ್ಸ್ನಾ ಪುಲಕಿತಯಾಮಿನೀಂ
ಫುಲ್ಲಕುಸುಮಿತಧ್ರುಮದಲಶೋಭಿನಿಂ

ಸುಹಾಸಿನಿಂ ಸುಮಧುರ ಭಾಷಿಣೀಂ
ಸುಖದಾಂ ವರದಾಂ ಮಾತರಮ್ || ೧ ||
ವಂದೇ ಮಾತರಮ್ |
ಕೋಟಿ-ಕೋಟಿ-ಕಂಠ-ಕಲ-ಕಲ-ನಿನಾದ-ಕರಾಲೆ ,
ಕೋಟಿ-ಕೋಟಿ-ಭುಜೈಧೃತ-ಖರಕರವಾಲೆ,
ಕೇ ಬೋಲೆ ಮಾ ತುಮಿ ಅಬಲೆ|
ಬಹುಬಲಧಾರಿಣಿಂ ನಮಾಮಿ ತಾರಿಣೀಂ
ರಿಪುದಲವಾರಿಣೀಂ ಮಾತರಮ್ || ೨ ||
ವಂದೇ ಮಾತರಮ್ |

ತುಮಿ ವಿದ್ಯಾ, ತುಮಿ ಧರ್ಮ
ತುಮಿ ಹೃದಿ, ತುಮಿ ಮರ್ಮ
ತ್ವಂ ಹಿ ಪ್ರಾಣಾಃ ಶರೀರೆ
ಬಾಹುತೆ ತುಮಿ ಮಾ ಶಕ್ತಿ,
ಹೃದಯೆ ತುಮಿ ಮಾ ಭಕ್ತಿ,
ತೋಮಾರಈ ಪ್ರತಿಮಾ ಗಡಿ ಮಂದಿರೆ-ಮಂದಿರೆ
ಮಾತರಮ್ || ೩ || ವಂದೇ ಮಾತರಮ್ |
ತ್ವಂ ಹಿ ದುರ್ಗಾ ದಶಪ್ರಹರಣಧಾರಿಣೀ
ಕಮಲಾ ಕಮಲದಲವಿಹಾರಿಣಿ
ವಾಣಿ ವಿದ್ಯಾದಾಯಿನಿ, ನಮಾಮಿ ತ್ವಾಮ್
ನಮಾಮಿ ಕಮಲಾಂ ಅಮಲಾಂ ಅತುಲಾಂ ಸುಜಲಾಂ ಸುಫಲಾಂ ಮಾತರಮ್ || ೪ ||

ವಂದೇ ಮಾತರಮ್ |
ಶ್ಯಾಮಲಾಂ ಸರಲಾಂ ಸುಸ್ಮಿತಾಂ ಭೂಷಿತಾಂ
ಧರಣೀಂ ಭರಣೀಂ ಮಾತರಮ್ || ೫ ||
ವಂದೇ ಮಾತರಮ್ |
– ಬಂಕಿಮಚಂದ್ರ ಚಟ್ಟೋಪಾಧ್ಯಾಯ
(‘ವಂದೇ ಮಾತರಂ’ ಗೀತೆಯನ್ನು ರವಿವಾರ, ಕಾರ್ತಿಕ ಶುದ್ಧ ನವಮಿ, ಶಕೆ ೧೭೯೭ (೭ ನವೆಂಬರ್ ೧೮೭೫) ಈ ದಿನದಂದು ಪೂರ್ಣವಾಗಿ ರಚಿಸಲಾಯಿತು.




🇮🇳ವಂದೇ ಮಾತರಂ’ ಗೀತೆಯ ಭಾವಾರ್ಥ🇮🇳


ಹೇ ಮಾತೆ, ನಾನು ನಿನಗೆ ವಂದಿಸುತ್ತೇನೆ.ಜಲ, ಧನಧಾನ್ಯಗಳಿಂದ ಸಮೃದ್ಧವಾಗಿರುವ, ದಕ್ಷಿಣದಲ್ಲಿನ ಮಲಯ ಪರ್ವತದಿಂದ ಬರುವ ವಾಯುಲಹರಿಗಳಿಂದ ಶೀತಲವಾಗುವ ಮತ್ತು ವಿಪುಲವಾದ ಕೃಷಿಯಿಂದ ಶ್ಯಾಮಲ ವರ್ಣವಾಗಿರುವ, ಹೇ ಮಾತೆ !

ಶ್ವೇತಶುಭ್ರ ಬೆಳದಿಂಗಳಿನಿಂದ ನಿನ್ನ ರಾತ್ರಿಗಳು ಪ್ರಫುಲ್ಲಿತವಾಗಿರುತ್ತವೆ, ಅದೇ ರೀತಿ ಅರಳಿದ ಹೂವುಗಳಿಂದ ನಿನ್ನ ಭೂಮಿಯು ವೃಕ್ಷಬಳ್ಳಿಗಳ ವಸ್ತ್ರಗಳನ್ನು ಧರಿಸಿದಂತೆ ಸುಶೋಭಿತವಾಗಿ ಕಾಣಿಸುತ್ತದೆ. ಸದಾ ಹಸನ್ಮುಖ ಮತ್ತು ಸದಾಕಾಲ ಮಧುರವಾಗಿ ಮಾತನಾಡುವ, ವರದಾಯಿನಿ, ಸುಖಪ್ರದಾಯಿನಿಯಾಗಿರುವ ಹೇ ಮಾತೆ !

ಮೂವತ್ತು ಕೋಟಿ ಕಂಠಗಳಿಂದ ಭಯಂಕರವಾದ ಗರ್ಜನೆಯು ಮೊಳಗುತ್ತಿರುವಾಗ ಮತ್ತು ಆರವತ್ತು ಕೋಟಿ ಕೈಗಳಲ್ಲಿ ಹಿಡಿದಿರುವ ಖಡ್ಗಗಳ ಮೊನೆಯು ಹೊಳೆಯುತ್ತಿರುವಾಗ ಹೇ ಮಾತೆಯೇ ನೀನು ಅಬಲೆಯಾಗಿದ್ದಿ ಎಂದು ಹೇಳಲು ಯಾರಿಗಾದರೂ ಧೈರ್ಯವಿದೆಯೇ? ವಾಸ್ತವದಲ್ಲಿ ಮಾತೆಯೇ ಅಪಾರ ಸಾಮರ್ಥ್ಯವು ನಿನ್ನಲ್ಲಿದೆ. ಶತ್ರುಸೈನ್ಯದ ಪಡೆಯನ್ನೇ ಹಿಂತಿರುಗಿಸಿ ನಿನ್ನ ಸಂತಾನವಾದ ನಮ್ಮನ್ನು ರಕ್ಷಿಸುತ್ತಿರುವ ಹೇ ಮಾತೆಯೇ ನಾನು ನಿನಗೆ ವಂದಿಸುತ್ತೇನೆ.

ನೀನೇ ನಮ್ಮ ಜ್ಞಾನ, ನೀನೇ ನಮ್ಮ ಚಾರಿತ್ರ್ಯ, ನೀನೇ ನಮ್ಮ ಧರ್ಮವಾಗಿದ್ದಿ. ನೀನೇ ನಮ್ಮ ಹೃದಯ, ನೀನೇ ನಮ್ಮ ಚೈತನ್ಯವಾಗಿದ್ದಿ. ನಮ್ಮ ದೇಹದಲ್ಲಿನ ಪ್ರಾಣವು ಖಂಡಿತವಾಗಿಯೂ ನೀನೇ ಆಗಿದ್ದಿ. ನಮ್ಮ ಮಣಿಕಟ್ಟಿನಲ್ಲಿರುವ ಶಕ್ತಿ ನೀನೇ ಮತ್ತು ಅಂತಃಕರಣದಲ್ಲಿನ ಕಾಳಿಯೂ ನೀನೇ. ದೇವಸ್ಥಾನದಲ್ಲಿ ನಾವು ಯಾವ ಮೂರ್ತಿಯ ಪ್ರತಿಷ್ಠಾಪನೆ ಮಾಡುತ್ತೇವೆಯೋ ಅದೆಲ್ಲವೂ ನಿನ್ನದೇ ರೂಪಗಳು.

ತನ್ನ ಹತ್ತೂ ಕೈಗಳಲ್ಲಿ ಹತ್ತು ಶಸ್ತ್ರಗಳನ್ನು ಧರಿಸಿದ ಶತ್ರುಸಂಹಾರಿಣಿ ದುರ್ಗೆಯೂ ನೀನೆ ಮತ್ತು ಕಮಲದ ಪುಷ್ಪಗಳಿಂದ ತುಂಬಿದ ಸರೋವರದಲ್ಲಿ ವಿಹರಿಸುವ ಕಮಲಕೋಮಲ ಲಕ್ಷ್ಮೀಯೂ ನೀನೆ. ನಿನಗೆ ನಮ್ಮ ನಮಸ್ಕಾರ. ಮಾತೆ, ನಾನು ನಿನಗೆ ವಂದಿಸುತ್ತೇನೆ. ಐಶ್ವರ್ಯದಾತ್ರಿ, ಪುಣ್ಯಪ್ರದಾಯಿನಿ ಮತ್ತು ಪಾವನ, ಪವಿತ್ರ ಜಲಪ್ರವಾಹಗಳಿಂದ ಮತ್ತು ಅಮೃತಮಯ ಫಲಗಳಿಂದ ಸಮೃದ್ಧಳಾಗಿರುವ ಮಾತೆಯೇ ನಿನ್ನ ಶ್ರೇಷ್ಠತನಕ್ಕೆ ಯಾವುದೇ ಹೋಲಿಕೆಯಿಲ್ಲ, ಯಾವುದೇ ಮಿತಿಯೂ ಇಲ್ಲ. ಹೇ ಮಾತೆ, ಹೇ ಜನನಿ ನಿನಗೆ ನನ್ನ ಪ್ರಣಾಮಗಳು.

ಭಾರತ ಮಾತೆಯ ಸುಪುತ್ರರೆ, ರಾಷ್ಟ್ರಾಭಿಮಾನದ ಜೋಪಾಸನೆಗೆ ಸನ್ನದ್ಧರಾಗಿ !

No comments:

Post a Comment