Monday, 1 August 2016

ಶಬ್ದದ ಸಾಮರ್ಥ್ಯ

ಶಬ್ದದ ಸಾಮರ್ಥ್ಯ



ಮನುಷ್ಯನ ಭಾವಾಭಿವ್ಯಕ್ತಿಯ ಶ್ರೇಷ್ಠ ಸಾಧವೇ ಶಬ್ದ. ಇದರಲ್ಲಿ ಧ್ವನ್ಯಾತ್ಮಕವೆಂತಲೂ ವರ್ಣಾತ್ಮಕವೆಂತಲೂ ಎರಡು ವಿಧ. ಮನುಷ್ಯನನ್ನು ಹೊರತುಪಡಿಸಿ ಉಳಿದೆಲ್ಲ ಜೀವಿಗಳು ವಿವಿಧ ಧ್ವನಿಯ ಮೂಲಕವೇ ತಮ್ಮ ತಮ್ಮ ಭಾವನೆಗಳನ್ನು ಪರಸ್ಪರ ಹಂಚಿಗೋಳ್ಳುತ್ತವೆ. ಮನುಷ್ಯಜೀವಿಗಳೂ ಮಾತೃಭಾಷೆಯನ್ನು ಕಲಿಯುವ ಪೂರ್ವದಲ್ಲಿ ಧ್ವನಿಯಿಂದಲೇ ತಮ್ಮ ಭಾವನೆಗಳನ್ನು ಅಭಿವ್ಯಕ್ತಗೊಳಿಸುತ್ತಿರುತ್ತವೆ.ವರ್ಣಾತ್ಮಕ ಶಬ್ದಗಳು ಭಾಷೆಗಳ ರೂಪದಲ್ಲಿ ವಿಕಾಸಗೊಂಡು ಇಂದು ವಿರಾಟ್ ರೂಪವನ್ನೇ ತಾಳಿವೆ. ಜಗತ್ತಿನಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಭಾಷೆಗಳು ವ್ಯವಹರಿಸಲ್ಪಡುತ್ತವೆ. ಇಬ್ಬರು ವ್ಯಕ್ತಿಗಳು ಒಂದೆಡೆ ಸೇರಿದಾಗ ಮಾತಿನ ಮೂಲಕ ಒಬ್ಬರನ್ನೊಬ್ಬರು ಪರಿಚಯಿಸಿಕೊಳ್ಳುತ್ತಾರೆ. ಕೆಲವರು ಈ ಪರಿಚಯವನ್ನು ಶಾಶ್ವತವಾಗಿ ಉಳಿಸಿಕೊಂಡರೆ ಮತ್ತೆ ಕೆಲವರು ಕೆಲವೇ ದಿನಗಳಲ್ಲಿ ಮರೆತುಬಿಡುತ್ತಾರೆ.

ನಾವು ನಮ್ಮ ಮಾತುಗಳಿಂದ ಅತಿ ದೂರದ ಮತ್ತು ಎಂದೂ ನೋಡದ ವ್ಯಕ್ತಿಯ ಜತೆ ಅತ್ಯಂತ ಆತ್ಮೀಯ ಘನಿಷ್ಠ ಸಂಬಂಧವನ್ನೂ ಮಾಡಿಕೊಳ್ಳಬಹುದು. ವ್ಯಾಪಾರಿಗಳು ಪತ್ರಮುಖೇನ ಇಲ್ಲವೇ ಫೋನ್, ಸೆಲ್ ಫೋನ್ ಮುಖಾಂತರ ಪರಸ್ಪರ ಪರಿಚಯ ಮಾಡಿಕೊಂಡು ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳ ಆದಾನ ಪ್ರದಾನ ಮಾಡುತ್ತಾರೆ. ಪರಸ್ಪರ ಎಂದೂ ಭೆಟ್ಟಿಯಾಗದ ಪರಿಚಯವಿಲ್ಲದ ಕೆಲವು ಯುವಕ-ಯುವತಿಯರು ಆಧುನಿಕ ತಂತ್ರಜ್ಞಾನದ ಮುಖಾಂತರ ಪರಿಚಯ ಮಾಡಿಕೊಂಡು ಪರಸ್ಪರರಲ್ಲಿ ಆಸಕ್ತರಾಗಿ ಬಾಳಸಂಗಾತಿಗಳಾಗಿ ಸುಖಮಯ ಸಾಂಸಾರಿಕ ಜೀವನ ಸಾಗಿಸುತ್ತಿದ್ದಾರೆ. ಇದೆಲ್ಲಕ್ಕೂ ಶಬ್ದದಲ್ಲಿರುವ ಅಲೌಕಿಕ ಸಾಮರ್ಥ್ಯವೇ ಕಾರಣ. ಅಂತೆಯೇ ಎಂದೂ ಕಾಣದ ದೇವರಲ್ಲಿ ಆತ್ಮೀಯ ಸಂಬಂಧವನ್ನು ಬೆಳಸಿ ಕೊನೆಗೆ ಜೀವನನ್ನು ದೇವನನ್ನಾಗಿಸುವುದಕ್ಕಾಗಿಯೇ ಜಾಗತಿಕ ಧರ್ಮಗಳು ಆಯಾ ಧರ್ಮಗಳ ತತ್ತ್ವಜ್ಞಾನಗಳು ಶಬ್ದವನ್ನೇ ಪ್ರಧಾನ ಸಾಧನವನ್ನಾಗಿ ಮಾಡಿಕೊಂಡಿದ್ದಾರೆ.

ಲೌಕಿಕ ಬದುಕಿನಲ್ಲಿ ಇಬ್ಬರು ವ್ಯಕ್ತಿಗಳು ಹೆಚ್ಚು ಹೆಚ್ಚು ಶಬ್ದಗಳನ್ನು ಬಳಸಿ ಪರಸ್ಪರರಲ್ಲಿ ಆತ್ಮೀಯತೆಯನ್ನು ಪ್ರಗಾಢಗೊಳಿಸಿಕೊಳ್ಳುವಂತೆ ಯಾರು ಜಪ, ಪಾರಾಯಣ, ಸ್ವಾಧ್ಯಾಯಗಳನ್ನು ಹೆಚ್ಚು ಹೆಚ್ಚು ಮಾಡುವರೋ ಅವರು ಆ ಅವ್ಯಕ್ತ ಪರಮ ತತ್ತ್ವವನ್ನು ತನ್ನ ಆತ್ಮರೂಪದಲ್ಲಿ ಅನುಭವಿಸಿ ಜೀವನ್ಮುಕ್ತರಾಗುವರು. ಹೀಗೆ ಶಬ್ದದ ಸಾಮರ್ಥ್ಯವನ್ನು ಅರಿತು ಅದರ ಲೌಕಿಕ, ಪಾರಲೌಕಿಕ ಪ್ರಯೋಜನ ಪಡೆದುಕೊಳ್ಳಬೇಕು.

Jagadguru Dr.chandrashekhar shivacharya mahashwamigalu

No comments:

Post a Comment