Sunday, 24 December 2017

ಸ್ವಚಾ ಮುಂಬಡ್ತಿ ಯೋಜನೆ ಷರತ್ತುಗಳು

💫💫💫💫💫💫💫💫💫💫💫


*ಸ್ವಚಾ ಮುಂಬಡ್ತಿ ಯೋಜನೆ ಷರತ್ತುಗಳು*

 Wednesday, 07.06.2017, 3:00 AM    ವಿಜಯವಾಣಿ ಸುದ್ದಿಜಾಲ 

| ಲ. ರಾಘವೇಂದ್ರ

ಕೆಳಕಂಡ ಷರತ್ತುಗಳನ್ನು ಪೂರೈಸಿದ ಉದ್ಯೋಗಿಗೆ ‘ಸ್ವಯಂಚಾಲಿತ ಮುಂಬಡ್ತಿ’ ಯೋಜನೆ ಸೌಲಭ್ಯವನ್ನು ವಿಸ್ತರಿಸಲಾಗುವುದು.

1. ಉದ್ಯೋಗಿಯು ಒಂದೇ ಹುದ್ದೆಯಲ್ಲಿ 15 ವರ್ಷಗಳ ನಿರಂತರ ಸೇವೆಯನ್ನು ತೃಪ್ತಿಕರವಾಗಿ ಸಲ್ಲಿಸಿರಬೇಕು.

2. ವೃಂದ ಮತ್ತು ನೇಮಕಾತಿ ನಿಯಮಗಳಂತೆ ಉನ್ನತ ಹುದ್ದೆಗೆ ಪದೋನ್ನತಿ ನೀಡಲು ನಿಗದಿಪಡಿಸಿರುವ ವಿದ್ಯಾರ್ಹತೆ ಇದ್ದು ಕಡ್ಡಾಯ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿರಬೇಕು.

3. ಪದೋನ್ನತಿಯ ಸಲುವಾಗಿ ಜ್ಯೇಷ್ಠತೆಗೆ ಪರಿಗಣಿಸುವ ಸೇವೆಯನ್ನು ಈ ಯೋಜನೆಯ ಸೌಲಭ್ಯವನ್ನು ವಿಸ್ತರಿಸಲು ಪರಿಗಣಿಸತಕ್ಕದ್ದು. ಆದರೆ ಸರ್ಕಾರದ ಸುತ್ತೋಲೆ ಸಂಖ್ಯೆ ಎಲ್​ಸಿಎ 1:21:1997 ದಿನಾಂಕ 9-1-97ರಲ್ಲಿ ಇಲಾಖೆಯ ವಿವಿಧ ಘಟಕಗಳಲ್ಲಿ ಸಲ್ಲಿಸಿದ ಸೇವೆಯ ಅವಧಿಯನ್ನು ಸಂಕಲಿಸಿ 15 ವರ್ಷಗಳು ಪೂರ್ಣಗೊಂಡಾಗ ಈ ಸೌಲಭ್ಯವನ್ನು ಮಂಜೂರು ಮಾಡಬಹುದು.

4. ‘ಡಿ’ ದರ್ಜೆ ಉದ್ಯೋಗಿಗಳಿಗೆ ಪದೋನ್ನತಿಗೆ ನಿಗದಿಪಡಿಸಿರುವ ವಿದ್ಯಾರ್ಹತೆ ಮತ್ತು ಇಲಾಖಾ ಪರೀಕ್ಷೆಗಳು ಇದ್ದಲ್ಲಿ ಅವುಗಳ ತೇರ್ಗಡೆ ಕಡ್ಡಾಯವಲ್ಲ.

5. ಪ್ರಾಥಮಿಕ ಶಾಲಾ ಶಿಕ್ಷಕರಿಗೆ, ದೈಹಿಕ ಶಿಕ್ಷಣ ಅಧ್ಯಾಪಕರುಗಳಿಗೆ ಪದೋನ್ನತಿ ಅರ್ಹತೆಗೆ ನಿಗದಿಪಡಿಸಿರುವ ಶೈಕ್ಷಣಿಕ ಮತ್ತು ವೃತ್ತಿಪರ ಪರೀಕ್ಷೆಗಳ ತೇರ್ಗಡೆ ಕಡ್ಡಾಯವಲ್ಲ.

6. ಆದರೆ, ಉದ್ಯೋಗಿಯು ತಾನು ಧಾರಣ ಮಾಡಿದ ಹುದ್ದೆಯಲ್ಲಿ ವೇತನ ಬಡ್ತಿ ಗಳಿಸಲು ನಿಗದಿಪಡಿಸಿರುವ ಕಡ್ಡಾಯ ಇಲಾಖಾ ಪರೀಕ್ಷೆಗಳ ತೇರ್ಗಡೆ ಅಗತ್ಯ.

ಉದ್ಯೋಗಿಯು 15 ವರ್ಷಗಳ ಅರ್ಹ ಸೇವೆ ಪೂರ್ಣಗೊಳಿಸುವ ಮುಂಚೆ ಉನ್ನತ ಹುದ್ದೆಗೆ ಪದೋನ್ನತಿ ಹೊಂದಿದಲ್ಲಿ ಸದರಿ ಉದ್ಯೋಗಿಯು 15 ವರ್ಷಗಳ ಸೇವೆಯನ್ನು ಪೂರ್ಣಗೊಳಿಸುವವರೆಗೆ ಕೆಳದರ್ಜೆ ಹುದ್ದೆಯ ವೇತನ ಶ್ರೇಣಿಯಲ್ಲಿಯೇ ಮುಂದುವರಿಯುವುದಾಗಿ ಲಿಖಿತ ಅಭಿಮತ ವ್ಯಕ್ತಪಡಿಸಲು ಅವಕಾಶವಿದೆ. ಇಂತಹ ಪ್ರಸಂಗಗಳಲ್ಲಿ ಉದ್ಯೋಗಿಗೆ ‘ಹಿರಿಯ ವೇತನ ಶ್ರೇಣಿ’ಯಲ್ಲಿ ವೇತನ ನಿಗದಿಪಡಿಸಿ ನಂತರ ಆ ವೇತನದ ಆಧಾರದ ಮೇಲೆ ಉನ್ನತ ಹುದ್ದೆಯ ವೇತನ ಶ್ರೇಣಿಗಳಲ್ಲಿ ನಿಯಮ 42-ಬಿ ಪ್ರಕಾರ ವೇತನ ನಿಗದಿಪಡಿಸಲಾಗುವುದು. (ಅ.ಜ್ಞಾ. ಸಂಖ್ಯೆ ಎಫ್ 25 ಎಸ್​ಆರ್​ಪಿ 91 ದಿನಾಂಕ 1-2-1993)

ಉದ್ಯೋಗಿಗೆ ಸ್ಥಗಿತ ವೇತನ ಬಡ್ತಿ ಪ್ರಾಪ್ತವಾಗುವ ದಿನಾಂಕಕ್ಕಿಂತ ಮುಂಚೆಯೇ ಸ್ವಯಂಚಾಲಿತ ಮುಂಬಡ್ತಿ ಮಂಜೂರಾದಲ್ಲಿ ಲಿಖಿತ ಅಭಿಮತ ವ್ಯಕ್ತಪಡಿಸಿ ಸ್ಥಗಿತ ವೇತನ ಬಡ್ತಿ ಪಡೆದು ನಂತರ ಹಿರಿಯ ವೇತನ ಶ್ರೇಣಿಯಲ್ಲಿ ನಿ 42-ಬಿ ಪ್ರಕಾರ ವೇತನ ನಿಗದಿಪಡಿಸಿಕೊಳ್ಳಲು ಅವಕಾಶವಿದೆ. (ಸ.ಅ.ಸಂ.ಎಫ್​ಡಿ 1 ಎಸ್​ಆರ್​ಪಿ 96 ದಿ 8-5-97)

ಸ್ಥಳೀಯ ಅಭ್ಯರ್ಥಿಯಾಗಿ ಹಾಗೂ ಕಾರ್ಯಪ್ರವೃತ್ತ (ವರ್ಕ್​ಚಾರ್ಜ್ಡ್) ಸಿಬ್ಬಂದಿಯಾಗಿ, ಸ್ಟೈಫಂಡರಿಯಾಗಿ ಅಥವಾ ದಿನಗೂಲಿ ನೌಕರನಾಗಿ ಸಲ್ಲಿಸಿದ ಸೇವೆಯನ್ನು ಸ್ವಯಂ ಚಾಲಿತ ಯೋಜನೆಯ ಸೌಲಭ್ಯಗಳಿಗೆ ಪರಿಗಣಿಸಲಾಗುವುದಿಲ್ಲ.

✨✨✨✨✨✨✨✨✨✨✨

No comments:

Post a Comment