Sunday, 24 December 2017

ವೇತನ ನಿಗದೀಕರಣದ ನಿಯಮಗಳು

🔹🔹🔹🔹🔹


*ವೇತನ ನಿಗದೀಕರಣದ ನಿಯಮಗಳು*


ಲ. ರಾಘವೇಂದ್ರ

ಸರ್ಕಾರಿ ನೌಕರನು ಒಂದು ಹುದ್ದೆಯಿಂದ ನೇಮಕಾತಿ ಹೊಂದಿದಾಗ ನಿಯಮಗಳಿಗನುಸಾರವಾಗಿ ಮತ್ತೊಂದು ಸರ್ಕಾರಿ ಹುದ್ದೆಗೆ ನೇಮಕ ಹೊಂದಿದಾಗ ವೇತನ ನಿಗದಿ (ಕರ್ನಾಟಕ ಸರ್ಕಾರಿ ಸೇವಾ ನಿಯಮ 41-ಎ) ಮಾಡಲಾಗುತ್ತದೆ. ಅದರ ವಿವರ ಇಲ್ಲಿದೆ.

1. ಸದೃಶ ವೇತನ ಶ್ರೇಣಿಯ ಹುದ್ದೆಗೆ ನೇಮಕಾತಿ: ಸರ್ಕಾರಿ ನೌಕರನು ನೇಮಕ ಹೊಂದಿದ ಹುದ್ದೆಯ ವೇತನ ಶ್ರೇಣಿಯು ಈ ಮೊದಲು ಅವನು ಹೊಂದಿದ್ದ ಹುದ್ದೆಯ ವೇತನ ಶ್ರೇಣಿಯಂಥದೇ ಆಗಿರುವಲ್ಲಿ, ಹಾಗೆ ನೇಮಕವಾದಾಗ ಆತನ ವೇತನವನ್ನು ಅವನು ಈ ಮೊದಲು ಹೊಂದಿದ್ದ ಹುದ್ದೆಯಲ್ಲಿ ಪಡೆದ ವೇತನಕ್ಕೆ ಸಮನಾದ ಹಂತದಲ್ಲಿ ನಿಗದಿಪಡಿಸಬೇಕು.

2. ಹೊಸ ಹುದ್ದೆಯಲ್ಲಿ ಮುಂದಿನ ವಾರ್ಷಿಕ ಬಡ್ತಿಯು ಹಿಂದಿನ ಹುದ್ದೆಯಲ್ಲಿ ಮುಂದುವರಿದಿದ್ದರೆ ಆ ಹುದ್ದೆಯಲ್ಲಿ ಯಾವ ದಿನಾಂಕದಂದು ಪ್ರಾಪ್ತವಾಗುತ್ತಿತ್ತೋ ಆ ದಿನಾಂಕದಂದೇ ಕೊಡತಕ್ಕದ್ದು.

3. ಉನ್ನತ ವೇತನ ಶ್ರೇಣಿಯ ಹುದ್ದೆಯಿಂದ ಕೆಳಗಿನ ವೇತನ ಶ್ರೇಣಿಗೆ ನೇಮಕಾತಿ: ಸರ್ಕಾರಿ ನೌಕರನು ನೇಮಕ ಹೊಂದಿದ ಹುದ್ದೆಯು ವೇತನ ಶ್ರೇಣಿಯು ಅವನು ಹಿಂದೆ ಹೊಂದಿದ್ದ ಹುದ್ದೆಯು ವೇತನ ಶ್ರೇಣಿಗಿಂತ ಕಡಿಮೆಯಾಗಿರುವಲ್ಲಿ, ಹಿಂದಿನ ಹುದ್ದೆಗೆ ನೇಮಕವಾದ ದಿನಾಂಕದಿಂದ, ಅವನು ನೇಮಕವಾದ ಹೊಸ ಹುದ್ದೆಯ ವೇತನ ಶ್ರೇಣಿಯಲ್ಲಿ ಅವನು ತಲುಪಬಹುದಾಗಿದ್ದ ವೇತನ ಹಂತಕ್ಕೆ ಸಮನಾದ ಹಂತವನ್ನು ಕಾಲ್ಪನಿಕವಾಗಿ ನಿಗದಿಪಡಿಸಿ, ಆ ವೇತನ ನೀಡಬೇಕು.

4. ಹೊಸ ಹುದ್ದೆಯಲ್ಲಿ ಮುಂದಿನ ವಾರ್ಷಿಕ ಬಡ್ತಿಯು, ಹಿಂದಿನ ಹುದ್ದೆಯಲ್ಲಿ ಮುಂದುವರಿದಿದ್ದರೆ ಆ ಹುದ್ದೆಯಲ್ಲಿ ಯಾವ ದಿನಾಂಕದಂದು ಪ್ರಾಪ್ತವಾಗುತ್ತಿತ್ತೋ ಆ ದಿನಾಂಕದಂದೇ ನೀಡಬೇಕು.

5. *ಹೆಚ್ಚಿನ ವೇತನ ಶ್ರೇಣಿಯ ಹುದ್ದೆಗೆ ನೇಮಕಾತಿ:*
ಹೊಸ ಹುದ್ದೆಯ ವೇತನ ಶ್ರೇಣಿಯ ಕನಿಷ್ಠ ವೇತನವು ಹಿಂದಿನ ಹುದ್ದೆಯ ವೇತನ ಶ್ರೇಣಿಯಲ್ಲಿ ಪಡೆಯುತ್ತಿದ್ದ ವೇತನಕ್ಕಿಂತ ಹೆಚ್ಚಾಗಿದ್ದರೆ, ಹೊಸ ಹುದ್ದೆಯ ಕನಿಷ್ಠ ಹಂತದಲ್ಲಿ ವೇತನ ನಿಗದಿಪಡಿಸುವುದು.

6. ಹೊಸ ಹುದ್ದೆಯಲ್ಲಿ ನೇಮಕಾತಿ ಆದ ದಿನಾಂಕದಿಂದ ಮಾತ್ರ ಮುಂದಿನ ವಾರ್ಷಿಕ ಬಡ್ತಿಯ ದಿನಾಂಕ ಪರಿಗಣಿಸಲಾಗುವುದು.

1. ಪದೋನ್ನತಿಯ ಸಂದರ್ಭದಲ್ಲಿ ವೇತನ ನಿಗದಿ (ಕರ್ನಾಟಕ ಸರ್ಕಾರಿ ಸೇವಾ ನಿಯಮ 42ಬಿ):

ಈ ಕೆಳಕಂಡ ಸಂದರ್ಭಗಳಲ್ಲಿ ಪದೋನ್ನತಿಯ ವೇತನ ನಿಗದಿಪಡಿಸಬೇಕಾಗುತ್ತದೆ.

★ಉನ್ನತ ಹುದ್ದೆಗೆ ನೇಮಕಾತಿ
★ಕಾಲಮಿತಿ ವೇತನ ಮುಂಬಡ್ತಿ
★ಹಿರಿಯ ವೇತನ ಶ್ರೇಣಿಗೆ ಸ್ವಯಂಚಾಲಿತ ಮುಂಬಡ್ತಿ

2. ಜಿ) ಸರ್ಕಾರಿ ನೌಕರನು ಒಂದು ಹುದ್ದೆಗೆ ಪದೋನ್ನತಿ ಪಡೆದು, ಆತನು ಆ ಹುದ್ದೆಯ ಕರ್ತವ್ಯಗಳನ್ನು ವಹಿಸಿಕೊಂಡ ದಿನಾಂಕದಿಂದ, ಈ ಕೆಳಗಿನ ಹುದ್ದೆಯ ಕಾಲಿಕ ವೇತನ ಶ್ರೇಣಿಯಲ್ಲಿನ ವೇತನದ ಆ ಮುಂದಿನ ಹಂತಕ್ಕೆ ವೇತನ ನಿಗದಿಪಡಿಸಬೇಕು.

ಜಿಜಿ) ಪದೋನ್ನತಿ ಹೊಂದಿದ ಹುದ್ದೆಯ ವೇತನ ಶ್ರೇಣಿಯ ಕನಿಷ್ಠ ಹಂತವು, ಈ ರೀತಿ ನಿಗದಿಪಡಿಸಬೇಕಾದ ವೇತನದ ಹಂತಕ್ಕಿಂತ ಹೆಚ್ಚಾಗಿದ್ದರೆ, ಪದೋನ್ನತಿ ಹುದ್ದೆಯ ವೇತನ ಶ್ರೇಣಿಯ ಕನಿಷ್ಠ ಹಂತದಲ್ಲಿ ವೇತನ ನಿಗದಿಪಡಿಸಬೇಕು.

ಜಿಜಿಜಿ) ಪದೋನ್ನತಿ ಹೊಂದಿದ ಹುದ್ದೆಯ ವೇತನ ಶ್ರೇಣಿಯ ಗರಿಷ್ಠ ಹಂತವು, ಈ ರೀತಿ ನಿಗದಿಪಡಿಸಬೇಕಾದ ವೇತನಕ್ಕಿಂತ ಕಡಿಮೆ ಇದ್ದಲ್ಲಿ, ಪದೋನ್ನತಿ ಹುದ್ದೆಯ ವೇತನ ಶ್ರೇಣಿಯ ಗರಿಷ್ಠ ಹಂತಕ್ಕೆ ನಿಗದಿಪಡಿಸಬೇಕು.

3. ವೇತನ ಪುನರ್​ನಿಗದಿ (ಕರ್ನಾಟಕ ಸರ್ಕಾರಿ ಸೇವಾ ನಿಯಮ 42ಬಿ (2)

ಜಿ) ಪದೋನ್ನತಿ ಪಡೆದ ವೇತನ, ಆತನ ಹಿಂದಿನ ಹುದ್ದೆಯಲ್ಲಿನ ವಾರ್ಷಿಕ ವೇತನ ಬಡ್ತಿಯ ದಿನದಂದು, ವೇತನ ಪುನರ್​ನಿಗದಿ ಮಾಡಬೇಕಾಗುತ್ತದೆ.

ಜಿಜಿ) ಆತನು ಪದೋನ್ನತಿ ಪಡೆಯದೆ ಹಳೆ ಹುದ್ದೆಯಲ್ಲಿಯೇ ಮುಂದುವರಿದಿದ್ದರೆ ಕೆಳಗಿನ ಹುದ್ದೆಯಲ್ಲಿ ವಾರ್ಷಿಕ ಬಡ್ತಿ ದಿನಾಂಕದಂದು ಪಡೆಯಬಹುದಾಗಿದ್ದ ವೇತನ ನಿಗದಿಪಡಿಸಿ, ವಾರ್ಷಿಕ ಬಡ್ತಿ ದಿನಾಂಕದಂದು ಪದೋನ್ನತಿ ಹೊಂದಿದ್ದರೆ ಹೊಸ ಹುದ್ದೆಯಲ್ಲಿ ನಿಗದಿಪಡಿಸಬಹುದಾದ ವೇತನ ಹಂತದಲ್ಲಿ ಪುನರ್​ನಿಗದಿ ಮಾಡುವುದು.

ಜಿಜಿಜಿ) ಪುನರ್​ನಿಗದಿಯಿಂದ, ಆತನಿಗೆ ಆರ್ಥಿಕ ಸೌಲಭ್ಯವಾಗುವಂತಿದ್ದರೆ, ಹಳೆಯ ಹುದ್ದೆಯಲ್ಲಿನ ವಾರ್ಷಿಕ ವೇತನ ಬಡ್ತಿ ದಿನಾಂಕವೇ ಅವನ ಮುಂದಿನ ವಾರ್ಷಿಕ ಬಡ್ತಿಗೆ ಪರಿಗಣಿಸತಕ್ಕದ್ದು. ಅಂದರೆ ವಾರ್ಷಿಕ ಬಡ್ತಿಯ ದಿನಾಂಕದ ಬದಲಾವಣೆ ಇರುವುದಿಲ್ಲ.

ಪುನರ್ ನಿಗದಿಯಿಂದ, ಆತನಿಗೆ, ಆರ್ಥಿಕ ಸೌಲಭ್ಯವಾಗಿಲ್ಲವಾದರೆ – ಆತನು ಪದೋನ್ನತಿ ಪಡೆದ ದಿನಾಂಕದಿಂದ ಒಂದು ವರ್ಷದ ನಂತರ ವಾರ್ಷಿಕ ವೇತನ ಬಡ್ತಿ ಮಂಜೂರು ಮಾಡತಕ್ಕದ್ದು ಹಾಗೂ ಅನಂತರ ವಾರ್ಷಿಕ ಬಡ್ತಿಯ ದಿನಾಂಕ ಆ ದಿನಕ್ಕೆ ಬದಲಾವಣೆ ಆಗಿರುತ್ತದೆ.

4. *ಬಡ್ತಿ ವೇಳೆ ವೇತನ ನಿಗದಿ ಬಗ್ಗೆ ಇಚ್ಛೆ ವ್ಯಕ್ತಪಡಿಸುವ ಸಂದರ್ಭಗಳು:*

ಉನ್ನತ ಹುದ್ದೆಗೆ ಪದೋನ್ನತಿ ಹೊಂದಿದಾಗ ಪದೋನ್ನತಿ ಹುದ್ದೆಯಲ್ಲಿ ವೇತನ ನಿಗದಿ ಸಲುವಾಗಿ, ತನ್ನ ಸ್ವಇಚ್ಛೆಯಿಂದ ಮುಂದಿನ ವೇತನ ಬಡ್ತಿ ದಿನಾಂಕದವರೆಗೆ ಕೆಳಗಿನ ಹುದ್ದೆಯ ವೇತನ ಶ್ರೇಣಿಯಲ್ಲಿ ಮುಂದುವರಿದು, ನಂತರ ಪದೋನ್ನತಿ ಹುದ್ದೆಯಲ್ಲಿ ವೇತನ ನಿಗದಿಪಡಿಸಿಕೊಳ್ಳಲು ಸಾಮಾನ್ಯ ಸಂದರ್ಭದಲ್ಲಿ ಅವಕಾಶವಿರುವುದಿಲ್ಲ. ಈ ರೀತಿ ಮುಂದುವರಿಯುವುದರಿಂದ ಯಾವುದೇ ವೇತನ ಹೆಚ್ಚುವರಿಯ ಸೌಲಭ್ಯ ಉಂಟಾಗುವ ಸಂಭವವಿರುವುದಿಲ್ಲ. ಆದರೆ ಕೆಳಗಿನ ಪ್ರಕರಣಗಳಲ್ಲಿ ಸರ್ಕಾರಿ ನೌಕರನು ಪದೋನ್ನತಿ ಪಡೆದಾಗ್ಯೂ ವೇತನ ಬಡ್ತಿ ಗಳಿಸುವವರೆಗೂ ಕೆಳದರ್ಜೆಯ ವೇತನ ಶ್ರೇಣಿಯಲ್ಲಿಯೇ ಮುಂದುವರಿದು, ನಂತರ ಉನ್ನತ ಹುದ್ದೆಯ ವೇತನ ಶ್ರೇಣಿಯಲ್ಲಿ ವೇತನ ನಿಗದಿಪಡಿಸಿಕೊಳ್ಳಲು ನಿಗದಿತ ಅವಧಿಯೊಳಗೆ ಇಚ್ಛೆ ವ್ಯಕ್ತಪಡಿಸಬಹುದು.

(1) ಸ್ಥಗಿತ ವೇತನ ಬಡ್ತಿಯ ನಿರೀಕ್ಷೆ

(2) ಕಾಲಮಿತಿ ಮುಂಬಡ್ತಿ ಯೋಜನೆಯ ಸೌಲಭ್ಯದ ನಿರೀಕ್ಷೆ

(3) ಸ್ವಯಂಚಾಲಿತ ಮುಂಬಡ್ತಿ ಯೋಜನೆಯ ಸೌಲಭ್ಯದ ನಿರೀಕ್ಷೆ.

ಅಂಥಹ ಸಂದರ್ಭಗಳಲ್ಲಿ ಇಚ್ಛೆ ವ್ಯಕ್ತಪಡಿಸಿದ ದಿನಾಂಕದವರೆಗೆ ಹಳೆಯ ಕೆಳದರ್ಜೆಯ ಹುದ್ದೆಯ ವೇತನ ಶ್ರೇಣಿಯಲ್ಲಿ ಪಡೆಯುತ್ತಿದ್ದ ವೇತನ ಹಂತದಲ್ಲಿಯೇ ಮುಂದುವರಿದು, ಇಚ್ಛೆ ವ್ಯಕ್ತಪಡಿಸಿದ ದಿನಾಂಕದಂದು ಪಡೆಯುವ ಅರ್ಹವಾದ ವೇತನದ ನಿಗದಿಯನಂತರ ನಿಯಮ 42(ಬಿ)(1)ರನ್ವಯ ಪದೋನ್ನತಿಯ ವೇತನ ನಿಗದಿ ಸೌಲಭ್ಯ ಪಡೆಯಬಹುದು.

(ಮುಂದುವರಿಯುವುದು…..)

🔹🔹🔹🔹🔹🔹🔹🔹🔹🔹🔹

No comments:

Post a Comment