Sunday, 31 July 2016

ಸೂರ್ಯ ನಮಸ್ಕಾರವೇ ಸುಂದರ ಸೋಪಾನ

💢'ಯೋಗ'ಕ್ಷೇಮ💢

🙏ಸೂರ್ಯ ನಮಸ್ಕಾರವೇ ಸುಂದರ ಸೋಪಾನ🙏

ಜಗತ್ತಿನಲ್ಲಿರುವ ಅನೇಕ ಸೃಷ್ಟಿಯಲ್ಲಿ ಸೂರ್ಯನಿಗಿಂತ ತೇಜೋವಂತವಾದುದು ಮತ್ತೊಂದಿಲ್ಲ. ಸೂರ್ಯ ತನ್ನ ಉದಯದಿಂದಲೇ ಲೋಕದ ಜೀವಿಗಳಿಗೆ ಕಾರ್ಯಶೀಲರಾಗುವಂತೆ ಪ್ರೇರಣೆ ನೀಡುತ್ತಾನೆ. ಅವನು ಜೀವಿಗಳ ಅಂತರಾತ್ಮ. ತನ್ನನ್ನು ತಾನು ಉರಿಸಿಕೊಂಡು ಇಡೀ ಜಗತ್ತಿಗೆ ಬೆಳಕು ಕೊಡುವಾತ. ಅವನಿಗೆ ಅಪಾರ ಶ್ರದ್ಧೆ, ಗೌರವ ತೋರುವ ಮೂಲಕ ನಮ್ಮ ಬದುಕನ್ನು ಹಸನು ಮಾಡಿಕೊಳ್ಳುವುದು ನಮ್ಮ ಕರ್ತವ್ಯವೇ ಆಗಿದೆ.

ಸೂರ್ಯ ನಮಸ್ಕಾರ ಸೂರ್ಯನ ಆರಾಧನೆಯ ಇನ್ನೊಂದು ಪದ್ಧತಿ. ಉದಯ ಸೂರ್ಯನ ಎಳೆಯ ಕಿರಣಗಳು ಶರೀರವನ್ನು ಸ್ಪರ್ಶಿಸುವುದರಿಂದ ಸೂರ್ಯಸ್ನಾನದ ಲಾಭ ದೊರೆಯುತ್ತದೆ. ಶರೀರಕ್ಕೆ ಚೈತನ್ಯ ಲಭ್ಯವಾಗಿ ಆರೋಗ್ಯ ಸುಧಾರಣೆಯೂ ಆಗುತ್ತದೆ.

ಸೂರ್ಯಾರಾಧನೆ ಮಾನವ ಕೋಟಿಯಲ್ಲಿರುವ ಜಡತ್ವ ನೀಗಿಸಿ ಸ್ವಾರ್ಥವನ್ನು ಸುಡುತ್ತದೆ. ಸೂರ್ಯನಮಸ್ಕಾರವನ್ನು ಹಲವು ಪ್ರಕಾರಗಳಲ್ಲಿ ಅಭ್ಯಸಿಸಬಹುದು. ತೇಜಸ್ಸು, ವರ್ಜಸ್ಸು ಮತ್ತು ಶಕ್ತಿ ಪಡೆಯಲು ಸೂರ್ಯೋಪಾಸನೆ ಉತ್ತಮ ಮಾರ್ಗ.ಅದಕ್ಕಾಗಿಯೇ ಸೂರ್ಯ ನಮಸ್ಕಾರವನ್ನು ಉಪಾಸನಾ ವ್ಯಾಯಾಮ ಎನ್ನುತ್ತಾರೆ. ಇದನ್ನೇ ‘ಆರೋಗ್ಯಂ- ಭಾಸ್ಕರಾದಿಚ್ಛೀತ್ ಎಂದು ಪ್ರಾಜ್ಞರು ಹೇಳಿದ್ದಾರೆ.

 ದೇಹಾರೋಗ್ಯ, ಇಂದ್ರಿಯ ನಿಗ್ರಹ, ಮಾನಸಿಕ ಸಂಯಮ ಮತ್ತು ಏಕಾಗ್ರತೆ ಪಾಲನೆ, ಸ್ಮರಣಶಕ್ತಿ ವಿಕಾಸಕ್ಕೆ ಸೂರ್ಯ ನಮಸ್ಕಾರ ಸುಂದರ ಸೋಪಾನ. ದೇಹದಾರ್ಢ್ಯ ಮತ್ತು ದೀರ್ಘಾಯಸ್ಸು ಇದರಿಂದ ಶತಸಿದ್ಧ. ಬಾಲರಿಂದ ಹಿಡಿದು ಸೀ, ಪುರುಷರು ( ಎಲ್ಲ ವಯೋಮಾನ) ತಪ್ಪದೆ ಇದನ್ನು ಮಾಡಬೇಕು.

 ಆದಿತ್ಯಸ್ಯ ನಮಸ್ಕಾರಾನ್ ಯೇ

ಕುರ್ವಂತಿ ದಿನೆ ದಿನೇ|

ದೀರ್ಘಮಾಯುರ್ಬಲಂ

ವೀರ್ಯಂ ತೇಜಸ್ತೇಷಾಂಚ ಜಯತೇ||

ಅಕಾಲ-ಮೃತ್ಯುಹರಣಂ ಸರ್ವವ್ಯಾ_-ವಿನಾಶನಮ್|

ಸೂರ್ಯಪಾದೋದಕಂ ತೀರ್ಥಂ ಜಠರೇ ಧಾರಯಾಮ್ಯಹಮ್||

ನಿತ್ಯವೂ ಸೂರ್ಯ ನಮಸ್ಕಾರ ಮಾಡಿ ಸೂರ್ಯೊಪಾದೋದಕವನ್ನು ಸೇವಿಸುವುದರಿಂದ ದೀರ್ಘಾಯಸ್ಸು, ಬಲ, ವೀರ್ಯ, ತೇಜಸ್ಸು ಇವುಗಳು ಪ್ರಾಪ್ತಿ. ಸರ್ವರೋಗ ನಿವಾರಣೆಯಾಗಿ ಅಕಾಲ ಮೃತ್ಯುವಿನಿಂದ ಪಾರಾಗುತ್ತೇವೆ.

 ಹಿರಣ್ಮಯೇನ ಪಾತ್ರೇಣ

ಸತ್ಯಸ್ಯಾಪಿಹಿತಂ ಮುಖಂ|

ತತ್ತ್ವಂ ಪೂಷನ್ ಅಪಾವೃಣು

ಸತ್ಯಧರ್ಮಾಯ ದೃಷ್ಟಯೇ||

ಹೇ ಸೂರ್ಯ ಭಗವಾನ್, ಪಾತ್ರೆಯ ಮುಚ್ಚಳದಂತೆ ನಿನ್ನ ಚಿನ್ನದ ಆವರಣವು ಸತ್ಯದ ಬಾಗಿಲನ್ನು ಮುಚ್ಚಿದೆ. ಸತ್ಯ ಧರ್ಮಗಳ ದರ್ಶನಕ್ಕಾಗಿ ಆ ಬಾಗಿಲನ್ನು ಸರಿಸು ಎಂಬುದು ನಮ್ಮ ವಿನಮ್ರ ಪ್ರಾರ್ಥನೆಯಾಗಲಿ.

No comments:

Post a Comment