Saturday, 24 February 2018

ಅಂಥವರು ನಿಮಗೆಲ್ಲಾದರು ಸಿಕ್ಕರೆ ನನಗೂ ತೋರಿಸಿ

ಅಂಥವರು ನಿಮಗೆಲ್ಲಾದರು ಸಿಕ್ಕರೆ ನನಗೂ ತೋರಿಸಿ!

ಕೆಲವರಿಗೆ ದುಡ್ಡಿನಲ್ಲಿ ಸಂತೋಷ ಸಿಕ್ಕರೆ, ಇನ್ನೊಬ್ಬರಿಗೆ ಕೀರ್ತಿಯಲ್ಲಿ ಸಿಗುತ್ತದೆ. ಹಾಗಂತ ಹಣ-ಹೆಸರು ಸಂಪಾದಿಸಿದವರೆಲ್ಲ ನೆಮ್ಮದಿಯಿಂದಿದ್ದಾರೆ ಎಂದು ಹೇಳಲಾಗದು. ಹಣದ ಹಿಂದೆ ಬಿದ್ದು ನೆಮ್ಮದಿ ಹಾಳು ಮಾಡಿಕೊಂಡವರಿದ್ದಾರೆ, ಬಡತನವಿದ್ದರೂ ಸಂತೃಪ್ತ ಜೀವನ ನಡೆಸುವವರಿದ್ದಾರೆ.

ನೀವು ಎಲ್ಲ ರೀತಿಯ ಜನರನ್ನು ಭೇಟಿ ಮಾಡಿರಬಹುದು. ಹಣ ಬೇಡ ಎನ್ನುವವರು, ಕೀರ್ತಿ ಬೇಡ ಎನ್ನುವವರು, ಐಷಾರಾಮಿ ಜೀವನ ಬೇಡ ಎನ್ನುವವರು, ಶ್ರಮ ಪಟ್ಟು ಕೆಲಸ ಮಾಡಲು ಇಚ್ಛಿಸದವರು ನಮ್ಮ-ನಿಮ್ಮ ನಡುವೆ ಇದ್ದಾರೆ. ಆದರೆ ಸಂತೋಷ-ನೆಮ್ಮದಿ ಬೇಡ ಎನ್ನುವವರು ನಿಮಗೆ ಸಿಕ್ಕಿದ್ದಾರೆಯೇ? ಇಲ್ಲ ತಾನೆ? ನಾನು ಕೂಡ ಅವೆಷ್ಟೋ ದೇಶಗಳನ್ನು ಸುತ್ತಿದ್ದೇನೆ, ಜನರನ್ನು ಭೇಟಿ ಮಾಡಿದ್ದೇನೆ. ಆದರೆ, ‘ನನಗೆ ಸಂತೋಷದಿಂದಿರಲು ಇಷ್ಟವಿಲ್ಲ ಸ್ವಾಮಿ’ ಎಂದು ಹೇಳಿದ ಒಬ್ಬನೇ ಒಬ್ಬ ಕೂಡ ಇಲ್ಲಿಯವರೆಗೆ ಸಿಕ್ಕಿಲ್ಲ. ಅಂಥವರು ನಿಮಗೆಲ್ಲಾದರು ಸಿಕ್ಕಿದ್ದರೆ ದಯವಿಟ್ಟು ನನಗೂ ತಿಳಿಸಿಕೊಡಿ. ಏಕೆಂದರೆ ನನ್ನ ಪ್ರವಚನಗಳನ್ನು ಕೇಳಲು ಬರುವ ಅಸಂಖ್ಯ ಜನರು ‘ಜೀವನದಲ್ಲಿ ಸಂತೋಷ, ನೆಮ್ಮದಿಯೇ ಇಲ್ಲವಾಗಿದೆ ಸ್ವಾಮೀಜಿ. ಹಣಕಾಸಿಗೇನೂ ಕೊರತೆಯಿಲ್ಲ ಆದರೆ ನೆಮ್ಮದಿ ಮಾಯವಾಗಿದೆ. ಏನು ಮಾಡಲಿ?’ ಎಂದು ನನ್ನನ್ನೇ ಕೇಳಿದ್ದಾರೆ.

ನನ್ನ ನಂಬಿಕೆಯ ಪ್ರಕಾರ ಸಂತೋಷವನ್ನು ಬಯಸದ ಮನುಷ್ಯನೊಬ್ಬ ಇರಲೂ ಸಾಧ್ಯವಿಲ್ಲ. ಹೌದು, ಪ್ರತಿ ಮನುಷ್ಯನ ಅಂತಿಮ ಗುರಿಯೇ ಸಂತೋಷದಿಂದ ಜೀವನ ನಡೆಸುವುದು. ಹಾಗಾದರೆ ಈ ಜಗತ್ತಿನಲ್ಲಿ ಎಲ್ಲರೂ ಸುಖಿಗಳೇ? ಇಲ್ಲ, ಎಲ್ಲರಿಗೂ ಸಂತೋಷ, ನೆಮ್ಮದಿ ಸಿಗುವುದಿಲ್ಲ. ಕೆಲವರಿಗೆ ಅದು ಯಾವತ್ತೂ ಮರಳುಗಾಡಿನ ಮರೀಚಿಕೆಯಿದ್ದಂತೆ. ಏಕೆಂದರೆ ಸಂತೋಷ ಎಲ್ಲಿದೆ ಎಂಬುದು ಅನೇಕರಿಗೆ ಗೊತ್ತಿಲ್ಲ.

ಕೆಲವರಿಗೆ ದುಡ್ಡಿನಲ್ಲಿ ಸಂತೋಷ ಸಿಕ್ಕರೆ, ಇನ್ನೊಬ್ಬರಿಗೆ ಕೀರ್ತಿಯಲ್ಲಿ ಸಿಗುತ್ತದೆ. ಹಾಗಂತ ಹಣ-ಹೆಸರು ಸಂಪಾದಿಸಿದವರೆಲ್ಲ ನೆಮ್ಮದಿಯಿಂದಿದ್ದಾರೆ ಎಂದು ಹೇಳಲಾಗದು. ಹಣದ ಹಿಂದೆ ಬಿದ್ದು ನೆಮ್ಮದಿ ಹಾಳು ಮಾಡಿಕೊಂಡವರಿದ್ದಾರೆ, ಬಡತನವಿದ್ದರೂ ಸಂತೃಪ್ತ ಜೀವನ ನಡೆಸುವವರಿದ್ದಾರೆ.  ಬದುಕಿನ ಸಣ್ಣ ಪುಟ್ಟ ಸಂತೋಷವನ್ನು ಹಾಳು ಮಾಡುತ್ತಿರುವುದೇ ತೀರದ ಆಸೆಗಳು. ಮನುಷ್ಯನ ಆಸೆಗಳಿಗೆ ಮಿತಿ ಎಂಬುದೇ ಇಲ್ಲ. ನಮ್ಮ ಆಕಾಂಕ್ಷೆಗಳ ಚೀಲದಲ್ಲಿ ದೊಡ್ಡ ತೂತು ಬಿದ್ದಿರುವ ಹಾಗಿದೆ. ಏನೇ ಮಾಡಿದರೂ ಆಸೆಗಳು ಪೂರೈಸುವುದಿಲ್ಲ. ಅವುಗಳ ಬೆಂಬೀಳುವ ನಾವು ಇರುವುದನ್ನು ಅನುಭವಿಸುವುದೂ ಇಲ್ಲ. ಸಾಧಾರಣ ಕಾರಿನಲ್ಲಿ ಸಂಚರಿಸುವವನೊಬ್ಬ, ತನ್ನಲ್ಲಿ ದುಬಾರಿ ಕಾರು ಇಲ್ಲವಲ್ಲ ಎಂದು ದುಃಖಿಸುತ್ತಾನೆ. ಅದೇ ಬೈಕ್ ಇರುವವನಿಗೆ ಕಾರಿಲ್ಲವಲ್ಲ ಎಂಬ ಕೊರಗು. ಸೈಕಲ್‌ನಲ್ಲಿ ಹೋಗುವವನ ಕಣ್ಣು ಬೈಕ್‌ನವನ ಮೇಲೆ.

ಪಾದಚಾರಿಗೆ ಸೈಕಲ್ ಇದ್ದಿದ್ದರೆ ಎಂಬ ಬಯಕೆ. ಚಪ್ಪಲಿಯಿಲ್ಲದೆ ನಡೆಯುವವನಿಗೆ ಚಪ್ಪಲಿ ಬೇಕು, ಆದರೆ ಕಾಲೇ ಇಲ್ಲದವನಿಗೆ ಕಾಲಿರುವವನ ಮೇಲೆ ಅಸೂಯೆ….ಹೀಗೆ ನಾವೆಲ್ಲರೂ ಬೇರೆಯವರೊಂದಿಗೆ ನಮ್ಮನ್ನು ನಾವು ಹೋಲಿಸಿಕೊಂಡು ತೀರಲಾರದ ಆಸೆಗಳ ಬಲೆಯಲ್ಲಿ ಬಿದ್ದು ಅತೃಪ್ತ ಜೀವನ ನಡೆಸುತ್ತೇವೆ. ಇಂಗ್ಲಿಷ್‌ನಲ್ಲಿ ಒಂದು ಮಾತಿದೆ- He who knows that enough is enough will always have enough.

ನೆಮ್ಮದಿಯ ಬದುಕು ನಡೆಸಲು ಏನು ಬೇಕು, ಎಷ್ಟು ಬೇಕು ಎಂದು ತಿಳಿದಿರುವವನಿಗೆ ಸಂತೃಪ್ತ ಜೀವನ ನಡೆಸಲು ಬೇಕಾದ್ದೆಲ್ಲವೂ ಇರುತ್ತದಂತೆ. ಅದಕ್ಕೆ ಸಂಬಂಧಿಸಿದ ಕತೆಯೊಂದಿದೆ. ಅದೊಂದು ಸುಂದರ ದ್ವೀಪ. ಅಲ್ಲಿ ಒಂದಷ್ಟು ಮೀನುಗಾರರು ವಾಸವಾಗಿದ್ದರು. ನಿರ್ಜನವಾಗಿದ್ದ ಆ ದ್ವೀಪಕ್ಕೆ ಆಗಾಗ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಅಲ್ಲೊಬ್ಬ ಮೀನುಗಾರನಿದ್ದ. ಜೀವನ ನಿರ್ವಹಣೆಗಾಗಿ ಮೀನುಗಾರಿಕೆ ನಡೆಸಿಕೊಂಡು, ಪ್ರವಾಸಿಗರಿಗಾಗಿ ದೋಣಿ ನಡೆಸುತ್ತ ಆರಾಮಾಗಿದ್ದ. ಅವನೆಂದೂ ದುಡ್ಡಿಗಾಗಿ ಆಸೆ ಪಟ್ಟವನಲ್ಲ. ಸಂಜೆ ಕೆಲಸ ಮುಗಿಸಿ ಬಂದು ಮಕ್ಕಳೊಡನೆ ಖುಷಿಯಿಂದ ಸಮಯ ಕಳೆಯುತ್ತಿದ್ದ. ಅವನೊಂದಿಗಿದ್ದ ಅನೇಕ ಗೆಳೆಯರು ಉದ್ಯೋಗ, ಸಂಪಾದನೆಯೆಂದು ಕುಟುಂಬ ತೊರೆದು ನಗರಗಳಿಗೆ ವಲಸೆ ಹೋಗಿದ್ದರು. ಹೀಗಿರುವಾಗ, ಒಮ್ಮೆ ಶ್ರೀಮಂತ ವ್ಯಾಪಾರಿಯೊಬ್ಬ ದ್ವೀಪದ ಸೌಂದರ್ಯ ಸವಿಯಲೆಂದು ಅಲ್ಲಿಗೆ ಬಂದ. ಮೀನುಗಾರ ಅವನನ್ನು ದ್ವೀಪದೆಲ್ಲೆಡೆ ಸುತ್ತಾಡಿಸಿದ. ದ್ವೀಪದ ಶ್ರೀಮಂತಿಕೆ ಗಮನಿಸಿ ಪ್ರವಾಸಿಗನ ವ್ಯಾಪಾರಿ ಬುದ್ಧಿ ಜಾಗೃತವಾಯ್ತು. ಅಲ್ಲೊಂದು ಐಷಾರಾಮಿ ಹೋಟೆಲ್, ವಸತಿಗೃಹ ನಿರ್ಮಿಸಿ ಅದ್ಭುತ ಪ್ರವಾಸಿತಾಣವನ್ನಾಗಿಸಿದರೆ ಹಣ ಮಾಡಬಹುದು ಎಂಬ ಯೋಚನೆ ಬಂತು.

‘ನೀನೇಕೆ ಇಲ್ಲೊಂದು ಹೋಟೆಲ್ ತೆರೆಯಬಾರದು. ಆಗ ಇಲ್ಲಿಗೆ ಬರುವವರ ಸಂಖ್ಯೆ ಇನ್ನಷ್ಟು ಹೆಚ್ಚುತ್ತದೆ ಅಲ್ಲವೆ?’ ಎಂದು ಮೀನುಗಾರನನ್ನು ಕೇಳಿದ. ‘ಹೋಟೆಲ್…?’ ಗೊಂದಲದಿಂದ ಕೇಳಿದ ಮೀನುಗಾರ. ‘ಹೌದು, ಹೋಟೆಲ್. ಜತೆಗೆ ಇಲ್ಲಿ ರಜಾದಿನಗಳನ್ನು ಕಳೆಯಲು ಬರುವವರಿಗಾಗಿ ಒಂದು ಲಾಡ್‌ಜ್‌, ಹಾಲಿಡೆ ವಿಲೇಜ್ ನಿರ್ಮಿಸಿದರೆ ಕೈ ತುಂಬ ದುಡ್ಡು ಬರುತ್ತದೆ. ಇಂಥದ್ದೊಂದು ಜಾಗವನ್ನು ಹಾಗೇ ಸುಮ್ಮನೆ ಬಿಟ್ಟಿರುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ’ ಎಂದ. ‘ಆದರೆ ನಾನೇಕೆ ಅವನ್ನೆಲ್ಲ ಮಾಡಬೇಕು?’ ಎಂದು ಕೇಳಿದ ಮೀನುಗಾರ. ‘ಅಯ್ಯೋ ದಡ್ಡ, ಈ ಜಾಗ ಚಿನ್ನದ ಮೊಟ್ಟೆಯಿಡುವ ಕೋಳಿಯಿದ್ದಂತೆ. ಒಮ್ಮೆ ಬಂಡವಾಳ ಹಾಕಿದರೆ ಸಾಕು. ನೀನು ನನಗಿಂತ ಶ್ರೀಮಂತನಾಗಬಲ್ಲೆ’ ಎಂದ ವ್ಯಾಪಾರಿ. ‘ಹಾಗಾದರೆ ಅದಕ್ಕೆಲ್ಲ ಎಷ್ಟು ವರ್ಷ ಬೇಕಾಗುತ್ತದೆ?’ ‘ನಾನು ಹೇಳಿದಂತೆ ಮಾಡಿದರೆ ಹೆಚ್ಚು ಕಡಿಮೆ ಮುಂದಿನ ಹತ್ತು ವರ್ಷಗಳಲ್ಲಿ ನೀನೊಬ್ಬ ಯಶಸ್ವಿ
ಉದ್ಯಮಿಯಾಗಿರುತ್ತೀಯ’. ‘ಹೌದಾ? ಆಮೇಲೆ ಅಷ್ಟೊಂದು ದುಡ್ಡು ತೆಗೆದುಕೊಂಡು ನಾನೇನು ಮಾಡಲಿ?’ ಎಂದು ಕೇಳಿದ ಮೀನುಗಾರ ನಿರ್ಲಿಪ್ತನಾಗಿ.

‘ಲೋ ದಡ್ಡಾ ಅದಕ್ಕೇ ನೀನಿನ್ನೂ ಮೀನು ಹಿಡಿಯುತ್ತಿದ್ದೀಯ. ಶ್ರೀಮಂತನಾದ ಮೇಲೆ ನೀನೂ ನನ್ನ ಹಾಗೆ ಪ್ರವಾಸ ಮಾಡಬಹುದು, ದ್ವೀಪಗಳನ್ನು ಸುತ್ತಬಹುದು, ಫಿಶಿಂಗ್ ಮಾಡಬಹುದು, ಹೆಂಡತಿ ಮಕ್ಕಳೊಡನೆ ಆರಾಮಾಗಿ ಸಮಯ ಕಳೆಯಬಹುದು’ ಎಂದು ವ್ಯಾಪಾರಿ. ‘ಅಯ್ಯೋ! ಅಷ್ಟೇನಾ? ನಾನು ಈಗ ಮಾಡುತ್ತಿ ರುವುದು ಅದನ್ನೇ ಅಲ್ವಾ? ಮತ್ತೇಕೆ ಅಷ್ಟು ಕಷ್ಟ ಪಡಲಿ ಹೇಳಿ?’ ಎಂದ ಮೀನುಗಾರ. ವ್ಯಾಪಾರಿಯಲ್ಲಿ ಉತ್ತರವಿರಲಿಲ್ಲ.

ರೈತನೊಬ್ಬ ತನ್ನ ಎಸ್ಟೇಟ್ ಹಾಗೂ ಅಲ್ಲಿದ್ದ ತನ್ನ ಮನೆಯನ್ನು ಮಾರಲು ನಿರ್ಧರಿಸಿದ. ಆತ ಹಲವಾರು ವರ್ಷಗಳಿಂದ ಆ
ಮನೆಯಲ್ಲಿ ನೆಲೆಸಿದ್ದ. ಆದರೆ ಇತ್ತೀಚೆಗೇಕೋ ಆ ಮನೆ ಚೆನ್ನಾಗಿಲ್ಲವೆಂದು, ಎಸ್ಟೇಟ್‌ನಲ್ಲಿ ಗಿಡ ಮರಗಳು ಒಣಗಿ ಹೋಗುತ್ತಿವೆಯೆಂದೂ, ಮಧ್ಯದ ಕೆರೆಯಲ್ಲಿ ಹೂಳು ತುಂಬಿಕೊಂಡಿದೆಯೆಂದೂ, ತೋಟದಿಂದ ಮನೆಗಿರುವ ದೂರ
ಜಾಸ್ತಿಿಯಾಯಿತು, ಎಸ್ಟೇಟ್‌ನಿಂದ ಸಿಟಿ ಬಹಳ ದೂರದಲ್ಲಿದೆಯೆಂದು….ಹೀಗೆ ಹಲವಾರು ತೊಂದರೆಗಳು ಎದ್ದೆೆದ್ದು ಕಾಣಿಸತೊಡಗಿದವು. ಕೊನೆಗೂ ಆತ ಒಂದು ನಿರ್ಧಾರಕ್ಕೆ ಬಂದ. ತನ್ನ ಎಸ್ಟೇಟ್ ಹಾಗೂ ಮನೆ ಮಾರಾಟಕ್ಕಿದೆಯೆಂದು, ಸೂಕ್ತ ವ್ಯಕ್ತಿಗಳ್ಯಾರಾದರೂ ಇದ್ದಾರೆಯೇ ಎಂದು ತಿಳಿಸಬೇಕೆಂದು ದಲ್ಲಾಳಿಯಲ್ಲಿ ಕೇಳಿಕೊಂಡ. ಅವರಿಗೆ ಸೂಕ್ತ ಕಮಿಷನ್ ಕೂಡ
ನೀಡಿದ. ಅದಾದ ನಂತರ ಆತನೂ ಬೇರೊಂದು ಜಾಗದ ಹುಡುಕಾಟದಲ್ಲಿದ್ದ. ಆದಷ್ಟು ಬೇಗ ಈ ಜಮೀನನ್ನು ಮಾರಿದರೆ
ಸಾಕು ಎಂದುಕೊಂಡ.

ಒಂದು ಬೆಳಗ್ಗೆೆ ಆತ ಪೇಪರ್ ಓದುತ್ತಿದ್ದಾಗ ಜಾಹೀರಾತೊಂದು ಕಣ್ಣಿಗೆ ಬಿತ್ತು. ‘ಸುಂದರ ಎಸ್ಟೇಟ್ ಮಾರಾಟಕ್ಕಿದೆ’ ಎಂದಿತ್ತು.
ಕುತೂಹಲದಿಂದ ಅದನ್ನು ಓದಿದ. ‘ನಗರದ ಜಂಜಾಟದಿಂದ ದೂರದಲ್ಲಿ ಮನೆಯಿರಬೇಕೆಂದು ಬಯಸುತ್ತಿದ್ದೀರ? ಹಾಗಾದರೆ
ಈ ಜಾಗವನ್ನೊಮ್ಮೆ ನೀವು ನೋಡಲೇಬೇಕು. ಈ ಎಸ್ಟೇಟ್ ಸಿಟಿಯಿಂದ ದೂರದಲ್ಲಿದ್ದರೂ ಸಕಲ ಮೂಲ ಸೌಕರ್ಯಗಳು
ಇಲ್ಲಿವೆ. ಹಸಿರಿನಿಂದ ಕಂಗೊಳಿಸುವ ಎಸ್ಟೇಟ್‌ನ ಮಧ್ಯೆದಲ್ಲಿ ಮನೆಯೊಂದಿದ್ದು, ಹಿಂಬದಿಯೇ ಕೆರೆ ಕೂಡ ಇದೆ. ಇನ್ನೇನು
ಬರಲಿರುವ ಚಳಿಗಾಲದಲ್ಲಿ ಮರ-ಗಿಡಗಳು ಮತ್ತೆ ಚಿಗುರಿ ಎಸ್ಟೇಟ್‌ನ ಸೌಂದರ್ಯ ಇಮ್ಮಡಿಯಾಗಲಿದೆ’ ಎಂದು ಬರೆದಿತ್ತು.

ಅದನ್ನು ಓದಿದ ರೈತನಿಗೆ ಬಹಳ ಖುಷಿಯಾಯಿತು. ವಾಸವಿದ್ದರೆ ಇಂಥ ಜಾಗದಲ್ಲಿ ವಾಸವಿರಬೇಕು, ಏನಾದರಾಗಲಿ ಈ ಎಸ್ಟೇಟ್
ನ್ನು ನಾನೇ ಕೊಂಡುಕೊಳ್ಳುತ್ತೇನೆ ಎಂದುಕೊಂಡ. ವಿಳಾಸ ಎಲ್ಲಿದೆ ಎಂದು ನೋಡಿದ. ಜಾಹೀರಾತಿನ ಕೊನೆಯಲ್ಲಿ ಎಸ್ಟೇಟ್‌ನ
ವಿಳಾಸ ಹಾಗೂ ಮಾಲೀಕನ ದೂರವಾಣಿ ಸಂಖ್ಯೆ ನಮೂದಿಸಲಾಗಿತ್ತು. ಆ ವಿಳಾಸ ನೋಡಿದ ಮೇಲೆ ಆತ ಎರಡೆರಡು ಬಾರಿ ಜಾಹೀರಾತನ್ನು ಓದಿದ. ಹೌದು, ಆ ಜಾಹೀರಾತು ಈತನ ಎಸ್ಟೇಟ್‌ನದ್ದೇ ಆಗಿತ್ತು. ಆತ ಕಾಣದಿದ್ದ ಎಸ್ಟೇಟ್‌ನ ಸೌಂದರ್ಯವನ್ನು ದಲ್ಲಾಳಿ ಕಂಡಿದ್ದ. ಅದನ್ನು ಸುಂದರ ಸಾಲುಗಳಲ್ಲಿ ಬರೆದು ಪತ್ರಿಕೆಗೆ ಜಾಹೀರಾತು ನೀಡಿದ್ದ. ಅದನ್ನು ಪದೇ ಪದೆ ಓದಿದ ಮೇಲೆ ರೈತನಿಗೂ ತನ್ನ ಎಸ್ಟೇಟ್‌ನ ಬಗ್ಗೆೆ ಹೆಮ್ಮೆಯೆನಿಸಿತು.

ಕೊನೆಗೆ ಆತ ದಲ್ಲಾಳಿಗೆ  ಫೋನಾಯಿಸಿ ‘ನಾನು ಮನಸ್ಸು ಬದಲಿಸಿದ್ದೇನೆ. ಎಸ್ಟೇಟನ್ನು ಮಾರುವುದಿಲ್ಲ. ನೀವು ನೀಡಿರುವ ಜಾಹೀರಾತನ್ನು ವಾಪಸ್ ತೆಗೆದುಕೊಳ್ಳಿ’ ಎಂದ. ಆಮೇಲೆ ಆತ ತನ್ನ ಎಸ್ಟೇಟ್‌ನ ಸೌಂದರ್ಯವನ್ನು ನೋಡುವ ದೃಷ್ಟಿಕೋನವೇ ಬದಲಾಯಿತು. ಕೆಲವೊಮ್ಮೆೆ ನಾವೂ ಕೂಡ ರೈತನ ಹಾಗೆಯೇ ವರ್ತಿಸುತ್ತೇವಲ್ಲವೆ?

Gour  Gopal prabhu

No comments:

Post a Comment